ಜಗದ್ದಳ ಸೋಮನಾಥ - 
ಸು. ೧೧೭೫. ಕರ್ಣಾಟಕ ಕಲ್ಯಾಣಕಾರಕ ಎಂಬ ವೈದ್ಯಗ್ರಂಥವನ್ನು ಬರೆದ ಜೈನಕವಿ. ಈತನಿಗೆ ವಿಚಿತ್ರಕವಿಯೆಂಬ ಬಿರುದು ಇದ್ದಂತೆ ತಿಳಿಯುತ್ತದೆ. ತನ್ನ ಗ್ರಂಥವನ್ನು ಸುಮನೋಬಾಣಕವಿಯೂ ಅಭಯಚಂದ್ರ ಸಿದ್ಧಾಂತಿಯೂ ತಿದ್ದಿದಂತೆ ಹೇಳಿರುವುದರಿಂದ ಈತ ಸುಮನೋಬಾಣನ ಕಾಲದವನೆಂದು ತಿಳಿಯುತ್ತದೆ; ಕೀರ್ತಿವರ್ಮನ (ಸು. ೧೧೦೦) ಗೋವೈದ್ಯವನ್ನು ಬಿಟ್ಟರೆ ಇದೇ ಕನ್ನಡ ವೈದ್ಯಗ್ರಂಥಗಳಲ್ಲಿ ಪುರಾತನವಾದುದು.

	ಸೋಮನಾಥ ತನ್ನ ಗ್ರಂಥದ ಪ್ರಾರಂಭದಲ್ಲಿ ಚಂದ್ರನಾಥನನ್ನು ಸ್ತುತಿಸಿದ್ದಾನೆ. ತರುವಾಯ ಸಿದ್ಧರು, ಸರಸ್ವತಿ, ಮಾಧವೇಂದು, ಸೈದ್ಧಾಂತಿಕಚಕ್ರವರ್ತಿ ಅಭಯಚಂದ್ರ, ಕನಕಚಂದ್ರ, ಪಂಡಿತದೇವ ಮೊದಲಾದವರನ್ನು ಸ್ಮರಿಸಿದ್ದಾನೆ. ಈ ಗ್ರಂಥ ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ. ಇದರಲ್ಲಿ ಒಟ್ಟು ಹದಿಮೂರು ಪ್ರಕರಣಗಳಿರುವಂತೆ ತೋರುತ್ತದೆ. ಸಂಸ್ಕೃತದಲ್ಲಿ ಪೂಜ್ಯವಾದ ಮುನಿಗಳು ಬರೆದಿರುವ ಕಲ್ಯಾಣಕಾರಕವನ್ನು ಆಧರಿಸಿ ತನ್ನ ಗ್ರಂಥವನ್ನು ಬರೆದಂತೆ ಕವಿ ಹೇಳಿಕೊಂಡಿದ್ದಾನೆ; ಜೊತೆಗೆ ಚರಕ, ವಾಗ್ಭಟ, ಸಿದ್ಧಸಾರ ಮುಂತಾದವರ ಗ್ರಂಥಗಳಿಂದಲೂ ವಿಷಯಗಳನ್ನು ಆರಿಸಿ ಮದ್ಯಮಾಂಸವರ್ಜಿತವಾಗಿ, ತನ್ನ ಕಲ್ಯಾಣಕಾರಕವನ್ನು ಬರೆದಿರುವುದಾಗಿ ತಿಳಿಸಿದ್ದಾನೆ.

	ಎಲ್ಲ ಕಲೆಗಳಲ್ಲಿಯೂ ಲೋಕೋಪಕಾರಿಯಾದ ವೈದ್ಯಕಲೆಯೇ ಮುಖ್ಯವಾದುದು ಎಂದು ಕವಿಯ ಅಭಿಮತ.

	ಆವಾವ ಕಲಾವಿದ್ಯೆಗ
	ಗಳೇವುವೊ ಲೋಕೋಪಕಾರಿ ವೈದ್ಯಮೆ ಸಾಲ್ಗುಂ
	ಭಾವಿಸೆ ಷಡ್ದçವ್ಯದೊಳಂ
	ಜೀವದ್ರವ್ಯಮೆ ಜಗಕ್ಕೆ ದೈವಮೆಂಬರ್

ಎಂದು ಹೇಳಿ, ವೈದ್ಯನನ್ನು ಎಂಥವರಿಗೆ ಮಾಡಬಾರದು ಎಂಬುದನ್ನು ಈ ಮುಂದಿನ ಪದ್ಯದಲ್ಲಿ ವಿವರಿಸಿದ್ದಾನೆ :

	ಕ್ರೂರಾಳಾಪಂಗೆ ದುರಾ
	ಚಾರಿಗೆ ಮಾತ್ಸರ್ಯಸಂಯುತಂಗಮಹಂ
	ಕಾರಿಗೆ ಮಿಥ್ಯಾದೃಷ್ಟಿಗೆ
	ಪಾರಕೆಯ್ತವಂಗೆ ಮಾಡಲಾಗದು ಮರ್ದಂ

	ಕಲ್ಯಾಣಕಾರಕದ ಪ್ರತಿಪ್ರಕರಣದಲ್ಲೂ ವ್ಯಾದಿಗಳ ವಿವರಗಳನ್ನು ನೀಡಲಾಗಿದೆ. ಪೀಠಿಕಾ ಪ್ರಕರಣವಾದ ಮೇಲೆ ದ್ವಿತೀಯ ಪರಭಾಷಾಪ್ರಕರಣದಲ್ಲಿ-ಅಸಾಧ್ಯ ಲಕ್ಷಣಂ, ದೇಶವಿಭಾಗಂ, ಋತುಗಳ್, ವಯಸ್ಸು ಗಿಡಮೂಲಿಕೆ ಸಂಗ್ರಹ ಕಾಲಂ, ಧಾತುಗಳ್, ಆಹಾರಬಲಂ, ವರ್ಜಕ್ರಿಯೆಯವರ್, ದಶವಾಯುಗಳ್, ದೂತಲಕ್ಷಣಂ, ಶುಭಧೂತಲಕ್ಷಣಂ, ಸ್ವಪ್ನಂ, ಪ್ರಕೃತಿಗಳ್, ನಿಮಿತ್ತಂ, ಸೂರ್ಯಚಂದ್ರನಾಡಿ, ಅರಿಷ್ಟ, ಜ್ಯೊÃತಿಷಂ-ಈ ವಿಷಯಗಳಿವೆ. ಮೂರನೆಯ ಷೋಡಶಜ್ವರನಿದಾನ ಚಿಕಿತ್ಸಾನಿರೂಪಣ ಪ್ರಕರಣದಲ್ಲಿ-ಭೂತಜ್ವರಲಕ್ಷಣ, ಕಾಮಜ್ವರಂ, ವಾತಜ್ವರಲಕ್ಷಣ, ವಾತಪಿತ್ತಶ್ಲೆÃಷ್ಮ ಜ್ವರಕ್ಕೆ ಲಕ್ಷಣಂ, ವಾತಶ್ಲೆÃಷ್ಮಜ್ವರಕ್ಕೆ, ತ್ರಿದೋಷಜ್ವರಂ, ಸನ್ನಿಪಾತಜ್ವರಂ, ಅಭಿಚಾರ ಕೃತ್ರಿಮ ಆಮಜ್ವರಲಕ್ಷಣಂ, ಶೀತಜ್ವರಂ, ಆಹಿಕಜ್ವರಂ, ವ್ಯಾಧಿ ಭೇದ, ಜ್ವರ ಪರಿಪಾಕಂ, ಜ್ವರಾದಿ ಪಥ್ಯಕ್ರಮ ಗಂಜಿಯ ಗುಣಂ, ಕಷಾಯ, ಪಿತ್ತಜ್ವರಕ್ಕೆ ಕಷಾಯ, ಶ್ಲೆÃಷ್ಮಜ್ವರ ಕಷಾಯಂ, ಪಿತ್ತಜ್ವರಕ್ಕೆ ಕಲ್ಕಂ, ಸನ್ನಿಪಾತಜ್ವರಕ್ಕೆ, ಮದನ ಜ್ವರಕ್ಕೆ, ಎದೆನೋವಿಗೆ, ಪಿತ್ತವಾತಾಜೀರ್ಣಜ್ವರಕ್ಕೆ, ಶೀತಜ್ವರಕ್ಕೆ, ಎಲ್ಲಾ ಜ್ವರಂಗಳ್ಗೆ, ಭೂತಜ್ವರಕ್ಕೆ, ಧೂಪಂ, ಸಾಮಾನ್ಯಮಲಹರಣಕ್ಕೆ-ಎಂಬ ಸಂಗತಿಗಳಿವೆ. ನಾಲ್ಕನೆಯ ಅತಿಸಾರ ಗ್ರಹಣೇ ನಿದಾನಚಿಕಿತ್ಸ ನಿರೂಪಣ ಪ್ರಕರಣದಲ್ಲಿ ವಾತಾತಿಸಾರ ಲಕ್ಷಣಂ, ಪಿತ್ತಾತಿಸಾರಲಕ್ಷಣಂ, ಶ್ಲೆÃಷ್ಮಾತಿಸಾರ ಲಕ್ಷಣಂ, ವಾಮಾತಿಸಾರ ಲಕ್ಷಣಂ, ಅಸಾಧ್ಯಾತಿಸಾರಂ, ಅಪಕ್ವಾತಿಸಾರಂ, ಪಿತ್ತಾತಿಸಾರವೂ ಐದನೆಯ ರಕ್ತಪಿತ್ತ ನಿದಾನ ಚಿಕಿತ್ಸಾ ನಿರೂಪಣ ಪ್ರಕರಣದಲ್ಲಿ ರಕ್ತಪಿತ್ತನಿದಾನ ರಕ್ತಪಿತ್ತದಲ್ಲಿ ವಿರೇಚನಂ, ಕಿ¾Äಏಲಾದಿ, ಪಿರಿಯೇಲಾದಿಗಳೂ ಆರನೆಯ ಪ್ರಕರಣದಲ್ಲಿ ಕ್ಷಯ ನಿದಾನ ಚಿಕಿತ್ಸಾ ನಿರೂಪಣವೂ ಏಳನೆಯ ಉದರರೋಗ ನಿದಾನ ಚಿಕಿತ್ಸಾನಿರೂಪಣ ಪ್ರಕರಣದಲ್ಲಿ ವಾತೋದರಂ, ಪಿತ್ತೊದರಂ, ಕಪೋದರಂ, ಸನ್ನಿಪಾತೋದರಂ, ಜಲೋದರಂ, ನಾರಾಚಘೃತಂ ಸೆರೆಯ ಲಕ್ಷಣಂ, ಉದರಕುಷ್ಠಗುಲ್ಮಕ್ಕೆ, ಶ್ವಾಸಕ್ಕೆ-ಎಂಬ ವಿಷಯಗಳೂ ಎಂಟನೆಯ ಗುಲ್ಮ ನಿದಾನ ಚಿಕಿತ್ಸಾನಿರೂಪಣಾ ಪ್ರಕರಣದಲ್ಲಿ ವಾತಗುಲ್ಮಂ, ಪಿತ್ತಗುಲ್ಮಂ ಶ್ಲೆÃಷ್ಮಗುಲ್ಮಂ, ರಕ್ತಗುಲ್ಮಂಗಳೂ ಒಂಬತ್ತನೆಯದರಲ್ಲಿ ಅಶ್ಮರೀಪ್ರಕರಣವೂ ಹತ್ತನೆಯದರಲ್ಲಿ ಕಾಮಾಲೆಯ ನಿದಾನ ಚಿಕಿತ್ಸಾಪ್ರಯೋಗವೂ ಹನ್ನೊಂದನೆಯದರಲ್ಲಿ ಮೂಲವ್ಯಾಧಿ ನಿದಾನ ಚಿಕಿತ್ಸಾ ಪ್ರಕರಣವೂ ಇನ್ನು ಉಳಿದ ಪ್ರಕರಣಗಳಲ್ಲಿ ಶ್ವಾಸ ಖಾಸ ಪ್ರಯೋಗಂ, ಸರ್ವವಿಷಕ್ಕೆ, ನಯನರೋಗ ನಿದಾನ ಚಿಕಿತ್ಸಾ ಪ್ರಕರಣಂ, ಭಗಂದರ ಪ್ರಯೋಗಂ, ವಿಷಪ್ರಯೋಗಂ-ಮೊದಲಾದ ವಿಷಯಗಳಿಗೂ ನಿರೂಪಿಸಲ್ಪಟ್ಟಿವೆ.

	ಕಲ್ಯಾಣಕಾರಕದಲ್ಲಿ ವ್ಯಾಧಿಗಳಿಗೆ ನಿರೂಪಿಸಿರುವ ನಿದಾನಕ್ರಮ ಸುಲಭವೂ ಪರಿಣಾಮಕಾರಿಯೂ ಆಗಿರುವಂತೆ ತೋರುತ್ತದೆ. ಉದಾಹರಣೆಗೆ ಜ್ವರೋತ್ಪತ್ತಿ ಮತ್ತು ಅದರ ಚಿಕಿತ್ಸಾವಿಧಾನಗಳನ್ನು ನೋಡಬಹುದು.

ಜ್ವರೋತ್ಪತ್ತಿಗೆ : ಮಲಸಂಗ್ರಹದಿಂದಾ
	ನಲನ¿Âವಿಂದಾಮಚಲನೆಯಿಂ ಜ್ವರಮೊಗೆಗುಂ|
	ಕೆಲರಾ ತ್ರಿಪುರಧ್ವಂಸಿಯ
	ಲಲಾಟಲೋಚನದಿಮೊಗೆದುದೆಂಬರ್ ಜ್ವರಮಂ||
ಚಿಕಿತ್ಸೆ : 	ಜ್ವರದಾದಿಯೊಳುಪವಾಸಂ
	ಜ್ವರಮಧ್ಯದಲ್ಲಿ ಗಂಜಿ ಪೇ¿್ವ ಕಷಾಯಂ|
	ಜ್ವರಪಾಕದೊಳಸ್ತಮಿತ
	ಜ್ವರದೊಳ್ ಮಲಹರಣಮಿವಿನಿತಿವಾರೋಗ್ಯಕರಂ||
	ಪೊಸಚಿಕ್ಕಣಿಕೆಯ ಪುಲ್ಲಂ
	ಪೊಸಬೆಳ್ಳುಳ್ಳಿಯ ರಸಂಗಳಂ ತಳದಿಂದಂ|
	ಪೊಸೆದಾಗಳೆ ನಸ್ಯಂಗೆಯೆ
	ಬಸವಲ್ಲೆನಿಪಾ ಜ್ವರಂಗಳಂ ಮುಸುಳಿಸುಗುಂ||

	ಕಲ್ಯಾಣಕಾರಕ ಗ್ರಂಥ ಇನ್ನೂ ಪ್ರಕಟವಾಗಿಲ್ಲ. ಉಪಲಬ್ಧವಿರುವ ಕೆಲವು ಹಸ್ತಪ್ರತಿಗಳಲ್ಲಿ ಏಕರೂಪತೆಯಿದ್ದಂತೆ ಕಂಡುಬರುವುದಿಲ್ಲ. ಒಟ್ಟಿನಲ್ಲಿ ಇದು ಒಂದು ಅತ್ಯಂತ ಉಪಯುಕ್ತ ವೈದ್ಯಗ್ರಂಥ.
(ಎನ್.ಬಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ